ಎಲ್ಲೊ ಜೋಗಪ್ಪ ನಿನ್ನರಮನೆ

ಜಾನಪದ

ಕಿನ್ನೂರಿ ನುಡಿಸೋನಾ ದನಿ ಚೆಂದಾವೊ

ಕಿನ್ನೂರಿ ನುಡಿಸೊನಾ ಬೆರಳಿನಂದ ಚೆಂದವೋ

ಚಿಕಿಯುಂಗುರಕೆ ನಾರಿ ಮನ್ಸಿಟ್ಟಳೊ

ಬೆಳ್ಳಿಯುಂಗರಕೆ ನಾರಿ ಮನಸಿಟ್ಟಳೊ

ಎಲ್ಲೊ ಜೋಗಪ್ಪ ನಿನ್ನರಮನೆ

ಎಲ್ಲೊ ಜೋಗಪ್ಪ ನಿನ್ನ ತಳಮನೆ ||

ಅಲ್ಲಲ್ಲಿ ದಾನವೊ ಅಲ್ಲಲ್ಲಿ ಧರ್ಮವೊ

ತಂದಿಡೆ ನಾರಿ ನೀ ನಿ ಸುಖವ |

ಅತ್ತಿತ್ತ ಬಂದರೆ ಅತ್ತೆ ಮಾವಂದಿರು ಬೈತಾರೆ

ಕೊಳ್ಳೋ ಜೋಗಪ್ಪ ನಿನ ಪಡಿದಾನ |

ಇತ್ತಿತ್ತ ಬಂದರೆತ್ತ ಮಾವಂದಿರು ಬಯ್ಯಲಿಕ್ಕೆ

ಆನೆಸಾಲು ನಾನು ಕದ್ದೆನೇನೆ ನಾರಿ

ಕುದುರೆ ಸಾಲು ನಾನು ಕದ್ದೆನೇನೆ

ಹೆರೆವಾ ಹೆಣ್ಣಿಗೆ ನಾನು ಬಿದ್ದೆನೇನೆ ||

ಇದ್ದಬದ್ದ ಬಟ್ಟೆನೆಲ್ಲ ಗಂಟುಮೂಟೆ ಕಟ್ಟಿಕೊಂಡು

ಹೊರಟಾಳೊ ಜೋಗಿಯ ಹಿಂದುಗೂಟಿ | ನಾರಿ

ಹೊರಟಾಳೊ ಜೋಗಿಯ ಹಿಂದುಗೂಟಿ

ಹಾರುವರ ಕೇರಿಯ ಗಾರೆ ಜಗಲಿಯ ಮೇಲೆ

ಕೋಲು ಕಿನ್ನೂರಿ ಮಾಡಿ ನುಡಿಸೋನೇ | ಜೊಗಿ

ಹೂವಾಗಿ ಬಾರೋ ನನ್ನ ತುರುಬೀಗೆ

ಹುಳ್ಳಿ ಹೊಲವಾ ಬಿಟ್ಟು ಒಳ್ಳೆ ಗಂಡಾನ ಬಿಟ್ಟು

ಸುಳ್ಳಾಡೋ ಜೋಗಿ ಕೂಡ್ ಹೋಗಬಹುದೆ | ನಾರಿ

ಪೊಳ್ಳಂತ ಜೋಗಿ ಕೂಡ್ ಹೋಗಬಹುದೆ ||

ಎಲ್ಲಾನು ಬಿಟ್ಟ ಮೇಲೆ ನನ್ನನ್ಯಾಕೆ ಬಿಡಲೊಲ್ಲೆ

ನನ್ಮೇಲೆ ನಿನಗೆ ಮನಸ್ಯಾಕೆ | ನಾರಿ

ನನ್ಮೇಲೆ ನಿನಗೆ ಮನಸ್ಯಾಕೆ

ನಿನ್ನ ಕಂಡಾಗಿನಿಂದ ಕಣ್ಣುರಿ ಕಾಣೊ ಜೋಗಿ

ನಿನ್ನ ಬಿಟ್ಟು ನಾನಿರಲಾರೆ ಜೋಗಿ ||

ಅಂತರಘಟ್ಟ ಬೆಂತರಘಟ್ಟ ಹತ್ತಲಾರೆ ಇಳಿಯಲಾರೆ

ಎಲ್ಲೊ ಜೋಗಪ್ಪ ನಿನ್ನರಮನೆ

ಎಲ್ಲೊ ಜೋಗಪ್ಪ ನಿನ್ನ ತಳಮಾನೆ

ಅಂತರಘಟ್ಟ ಬೆಂತರಘಟ್ಟ ಅಲ್ಲಿಗರವತ್ತು ಘಟ್ಟ

ಅಲ್ಲಿದೆ ಕಾಣೆ ನನ್ನರಮನೆ | ನಾರಿ

ಅಲ್ಲಿದೆ ಕಾಣೆ ನನ್ನರಮನೆ ನಾರಿ ||